"ಕೊಪ್ಪಳದ ನೀರ್ ಸಾಬ"

ಜನತೆಗೆ ಮೂಲಭೂತ ಅವಶ್ಯಕ ಕುಡಿಯುವ ನೀರಿನ ಸೇವೆ .. ಜನತೆ ಕೆ.ಎಂ.ಸಯ್ಯದ್ ರನ್ನು ಕರೆಯುವುದು "ಕೊಪ್ಪಳದ ನೀರ್ ಸಾಬ" ಎಂದು....ಪ್ರಥಮ ಬಾರಿಗೆ ಕೊಪ್ಪಳದ ಅಟೋಡ್ರೈವರ್ ಗಳಿಗೆ ಸಮವಸ್ತ್ರ ವಿತರಣೆ.... ಅವರಿಗಾಗಿ ಅಟೋ ಸ್ಟಾಂಡ್ ನಿರ್ಮಾಣ...ಯುವ ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ವಿವಿದ ಆಟೋಟಗಳ ಸ್ಪರ್ಧೆಗಳ ಆಯೋಜನೆ ಮತ್ತು ಪ್ರಾಯೋಜಕತ್ವ.....ವಿವಿದ ಸಂಘ ಸಂಸ್ಥೆಗಳಿಗೆ ಧನಸಹಾಯ... ಬಡ ಮಹಿಳೆಯರಿಗೆ ಸೀರೆ ವಿತರಣೆ...

Saturday, April 13, 2013

ಸುಸ್ವಾಗತ


ಜೀವನ ಎನ್ನುವುದು ಅನುಭವಗಳ ಅಗಣಿತ ಗಣಿ. ಅದು ನಮ್ಮ ಮುಂದಿರಿಸುವ ಸವಾಲುಗಳನ್ನು ಸ್ವೀಕರಿಸಿ, ಗುರಿಗಳತ್ತ ಮುನ್ನಡೆಯುವುದೇ ನಮ್ಮ ಧ್ಯೇಯವಾಗಬೇಕು. ಗುರಿಗಳತ್ತ ಗಮನವಿದ್ದರೆ ದೇವನೆಂಬ ಸದ್ಗುರುವಿನ ಮಾರ್ಗದರ್ಶನ ಇದ್ದೇ ಇರುತ್ತದೆ ಎಂಬುದು ನನ್ನ ದೃಢ ನಂಬಿಕೆ.
ಕರ್ನಾಟಕದ ರಾಜಕೀಯದಲ್ಲಿ ನಾಲ್ಕು ದಶಕಗಳ ಹಿಂದೆ ನಾನು ಹೆಜ್ಜೆ ಇಡತೊಡಗಿದಾಗ ಒಂದು ದಿನ ನಾನು ರಾಜ್ಯದ ಮುಖ್ಯಮಂತ್ರಿ ಗದ್ದುಗೆಯತ್ತ ನಡೆಯುವೆನೆಂಬ ಕನಸು ಕಂಡಿರಲಿಲ್ಲ. ನನಗೆ ವಹಿಸಿದ ಕೆಲಸಗಳು ಮತ್ತು ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಮಾತ್ರ ನನ್ನ ಕಣ್ಣ ಮುಂದಿತ್ತು. ನನ್ನ ರಾಜಕೀಯ ಜೀವನದ ಉದ್ದಕ್ಕೂ ಜನರ ಹಿತಾಸಕ್ತಿಗಳ ರಕ್ಷಣೆಯೇ ನನ್ನ ಆದ್ಯತೆಯಾಗಿತ್ತು.
ಈಗ ನನ್ನ ಜೀವನ ಮತ್ತು ರಾಜಕೀಯ ಎರಡೂ ಕವಲು ದಾರಿಯಲ್ಲಿ ನಂತಿದೆ. ನಾನೊಂದು ಹೊಸ ನಿರ್ಧಾರ ಕೈಗೊಳ್ಳಲೇಬೇಕಾದ ಗಳಿಗೆ ಬಂದಿದೆ. ಆದರೆ ಮುಸುಕುವ ಮಬ್ಬಿನಲ್ಲಿ ಜನಹಿತ ರಕ್ಷಣೆಯ ಸಂಕಲ್ಪದ ಬೆಳಕು ನನ್ನ ಕೈಹಿಡಿದು ನಡೆಸಲಿದೆ ಎಂಬ ನಂಬಿಕೆ ನನಗಿದೆ.
ಕಳೆದ ಐದು ವರ್ಷಗಳಲ್ಲಿ ಏನೇನಾಯಿತು ಎನ್ನುವುದು ನಿಮಗೆ ತಿಳಿದೇ ಇದೆ. 2007 ರಲ್ಲಿ ನಾನು ಜಾತ್ಯತೀತ ಜನತಾದಳದ ನೆರವಿನೊಂದಿಗೆ ಸರ್ಕಾರ ರಚಿಸಿದಾಗ ಆ ಪಕ್ಷದ ಮಿತ್ರರಿಂದ ನನಗೆ ನಿಜಕ್ಕೂ ಅನ್ಯಾಯವಾಯಿತು. ಆದರೆ ರಾಜ್ಯದ ಮತದಾರರು ನನಗೆ ನ್ಯಾಯ ಒದಗಿಸಿ ಮುಖ್ಯಮಂತ್ರಿಯಾಗುವಂತೆ ಆಶೀರ್ವಾದ ಮಾಡಿದರು. ವಿಂಧ್ಯ ಪರ್ವತದ ಈಚೆ ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಪ್ರಥಮ ಬಾರಿಗೆ ಸರ್ಕಾರ ರಚಿಸಿತು. ಅದೊಂದು ಐತಿಹಾಸಿಕ ಅವಕಾಶ ಎಂದು ಭಾವಿಸಿದ ನಾನು ಜನಹಿತದ ನನ್ನ ಕನಸುಗಳನ್ನು ಸಾಕಾರಗೊಳಿಸಲು ಕಾರ್ಯ ಪ್ರವೃತ್ತನಾದೆ. ಸಮಾಜದ ಕಟ್ಟ ಕಡೆಯ ಮನುಷ್ಯರು, ಮಹಿಳೆಯರು, ಮಕ್ಕಳು ಅಭಿವೃದ್ಧಿಯಲ್ಲಿ ಪಾಲು ಪಡೆಯುವಂತಾಗಲು ವಿಶಿಷ್ಟ ಯೋಜನೆಗಳನ್ನು ರೂಪಿಸಿದೆ. ಬೈಸಿಕಲ್ ವಿತರಣೆ, ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ ಬಾಂಡ್, ಹಜ್ ಭವನ ನಿರ್ಮಾಣ, ಹಾಲಿಗೆ ಸಹಾಯಧನ ಮುಂತಾದ ಯೋಜನೆಗಳು ಸಮಾಜದ ಆ ವರ್ಗಗಳನ್ನು ಸ್ಪರ್ಶಿಸುವ ಸಾಧನಗಳಾದುವು. ರೈತರಿಗೆ, ದುಡಿಯುವ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ಯೋಜನೆ ದೇಶದಲ್ಲೇ ಪ್ರಥಮ ಎನ್ನುವ ಮನ್ನಣೆ ಪಡೆಯಿತು. ಅನಪೇಕ್ಷಿತ ಸವಾಲುಗಳು ಇದ್ದೇ ಇದ್ದುವು; ಆದರೆ ಅವು ನನ್ನ ಕನಸುಗಳನ್ನು ಕಲಕಿ, ಕೊಂಕಿಸಲಿಲ್ಲ.
ಶರಣರು, ಹರಿದಾಸರು, ಸೂಫಿ ಸಂತರ ದಾರ್ಶನಿಕತೆ ಮತ್ತು ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಲೋಹಿಯಾ, ಜೆ.ಪಿ. ಅವರಂಥವರ ಚಿಂತನೆ ನನ್ನ ಬೆನ್ನ ಹಿಂದಿನ ಬೆಳಕಾಗಿ ಇರುವುದರಿಂದ ಕರ್ನಾಟಕವನ್ನು ಒಂದು ಮಾದರಿ ರಾಜ್ಯವಾಗಿ ರೂಪಿಸಬೇಕು ಎಂಬ ಮಹದಾಸೆ ನನ್ನದಾಗಿತ್ತು.
ಈಗ, ಹಳೆಯದೆಲ್ಲವ ಹಿಂದಿಕ್ಕಿ ಹೊಸ ಹೊಸ ಮನ್ವಂತರಕ್ಕೆ ಮುಖ ಮಾಡಿದ್ದೇನೆ. ‘ಕರ್ನಾಟಕ ಜನತಾ ಪಕ್ಷ’ ಜನಹಿತಕ್ಕೆ ಸಂಕೇತವಾಗಲಿದೆ. ಹೊಸಪಕ್ಷವನ್ನು ಪ್ರಾದೇಶಿಕ ಪಕ್ಷವೆಂದು ಕೆಲವರು ಕರೆದರೂ ಅದಕ್ಕೆ ರಾಷ್ಟ್ರೀಯ ದೃಷ್ಠಿಕೋನದ ಪ್ರಭಾವಳಿಯಿದೆ. ಜಾತ್ಯತೀತತೆ ಅದರ ಬೆನ್ನೆಲುಬಾಗಲಿದೆ.
ಬನ್ನಿ ನನ್ನೊಂದಿಗೆ ಕೈಜೋಡಿಸಿ… ಸಮೃದ್ಧ ಕರ್ನಾಟಕ ಕಟ್ಟುವ ಕಾರ್ಯದಲ್ಲಿ ಸಹಭಾಗಿಗಳಾಗಿ…

-ಇಂತಿ ತಮ್ಮ ವಿಶ್ವಾಸಿ
ಬಿ.ಎಸ್. ಯಡಿಯೂರಪ್ಪ

No comments:

Post a Comment